ಮೀನಾ ಕುಮಾರಿ
1932-72. ಹಿಂದೀ ಚಿತ್ರರಂಗದಲ್ಲಿ ಮಿಂಚಿ ಅಸ್ತಮಿಸಿದ ಉತ್ತಮ ಅಭಿನಯಕ್ಕೆ ಹೆಸರಾಗಿದ್ದ ತಾರೆ. ಸುಮಾರು ಹತ್ತುವರ್ಷಗಳಲ್ಲಿ ಐದು ಬಾರಿ ಫಿಲಂಫೇರ್ ಉತ್ತಮ ನಟಿ ಪ್ರಶಸ್ತಿ ಪಡೆದ ಈಕೆಯ ಸಾಧನೆ ಅದ್ಭುತವಾದುದು. 1932ರ ಆಗಸ್ಟ್ 1ರಂದು ಅಲಿಭಕ್ಷ್ ಮತ್ತು ಇಕ್‍ಬಲ್ ಬೇಗಂರ ಎರಡನೆ ಮಗಳಾಗಿ ಮುಂಬಯಿಯಲ್ಲಿ ಜನನ. ತಾಯಿ-ತಂದೆ ಇಟ್ಟ ಹೆಸರು ಮಹಜಬೀನ್. ತಾಯಿ ಕವಿ ರವೀಂದ್ರರ ದೂರದ ಸಂಬಂಧಿ. ಚಿಕ್ಕಂದಿನಿಂದಲೇ ಸ್ಟುಡಿಯೋ ಪರಿಸರದಲ್ಲಿ ಬೆಳೆದಳು. ಲೆದರ್ ಫೇಸ್ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದಳು. ಅನಂತರ ನಾಲ್ಕು ವರ್ಷಗಳಲ್ಲಿ ಅಧೂರಿ ಕಹಾನಿ, ಪೂಜಾ, ನಯೀ ರೋಷನೀ, ಬಹನ್, ವಿಜಯಾ, ಕಸಾಟಿ ಮತ್ತು ಗರೀಬ್ ಚಿತ್ರಗಳಲ್ಲಿ ಅಭಿನಯಿಸಿದಳು. ಈಕೆ ಶಾಲೆಗಿಂತ ಮನೆಯಲ್ಲಿ ಕಲಿತುದೇ ಹೆಚ್ಚು. ಉರ್ದುಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ. ಮಹಜಬೀನ್ ವಿಜಯ ಭಟ್ರ ಏಕ್ ಹಿ ಪೂಲ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಬೇಬಿ ಮೀನಾ ಎಂದು ನಾಮಕರಣವಾಯಿತು. ಬಚ್ಚೋಂಕೇ ಖೇಲ್‍ನಲ್ಲಿ ಅಘಾ ಜೊತೆ ನಟಿಸಿದಾಗ ಮೀನಾಗೆ 14 ವರ್ಷ.

	ಬಸಂತ್ ಸ್ಟುಡಿಯೋವಿನಲ್ಲಿ ಮೀನಾ ನಟಿಸಿದ ಪ್ರಥಮ ಚಿತ್ರ ಲಕ್ಷ್ಮೀನಾರಾಯಣ್. ಇದರಲ್ಲಿ ಲಕ್ಷ್ಮಿಯಾಗಿ ಅಭಿನಯಿಸಿದ ಆಕೆಯ ಪಾತ್ರವನ್ನು ಬಹಳ ಜನ ಮೆಚ್ಚಿಕೊಂಡರು. ಹನುಮಾನ್ ಪಟಲ್, ಶ್ರೀಗಣೇಶ್ ಮಹಿಮಾ, ವಿಜಯ್ ಮುಂತಾದ ಪೌರಾಣಿಕ ಚಿತ್ರಗಳಲ್ಲಿ ಪಾತ್ರವಹಿಸಿದಳು. ಹೋಮಿ ವಾಡಿಯಾರ ಅಲ್ಲಾವುದ್ದೀನ್‍ನಲ್ಲಿ ಮಹಿಪಾಲನೊಂದಿಗೆ ಅಭಿನಯಿಸಿದಳು.

	ಹದಿನೆಂಟು ವರ್ಷದ ಮೀನಾ ತಮಾಷಾದಲ್ಲಿ ದೇವ್‍ಆನಂದ್ ಮತ್ತು ಅಶೋಕ್ ಕುಮಾರ್‍ರೊಂದಿಗೆ ನಟಿಸಿದಳು. 1951ರಲ್ಲಿ ಅಮ್ರೋಹಿಯ ಅನಾರ್ಕಲಿಗೆ ಮಧು ಬಾಲಾ ಬದಲಾಗಿ ಆಯ್ಕೆಯಾದಳು. ಭಾರತೀಯ ಚಲನಚಿತ್ರಗಳಲ್ಲಿ ಚರಿತ್ರಾರ್ಹವಾಗಿ ಉಳಿಯಬಲ್ಲ ಕೆಲವು ದೃಶ್ಯಗಳು ಅನಾರ್ಕಲಿಯಲ್ಲಿವೆ. ಮುಂಬಯಿ ಸಮೀಪ ಅಪಘಾತಕ್ಕೆ ಸಿಲುಕಿ ಕೈಗೆ ಏಟು ಬಿದ್ದಿತ್ತು. ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಅಮ್ರೊಹೀಯ ಭೇಟಿಯಾಯಿತು.

	1951ರ ಉತ್ತರಾರ್ಧದಲ್ಲಿ ಕೆಲಸ ಮಾಡಿದಳು. 1952ರ ಫೆಬ್ರುವರಿ 14ರ ರಾತ್ರಿ ನಿಖಾ ನಡೆದು, ಮಹಜಬೀನ್ ಮತ್ತು ಸೆಮೀದ್ ಅವಿiÁನ್ ಹೈದರ್ (ಕಮಾಲ್ ಅಮ್ರೋಹಿಯ ಹೆಸರು) ಮದುವೆಯಾಯಿತು. 1952ರ ಜುಲೈನಲ್ಲಿ ತಮಾಷಾ ಬಿಡುಗಡೆಯಾಯಿತು; ಅದರೆ ಯಶಸ್ವಿಯಾಗಲಿಲ್ಲ. 1952ರ ಅಕ್ಟೋಬರ್‍ನಲ್ಲಿ ಬೈಜುಬಾವ್ರಾ ಮುಂಬಯಿಯಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಮೀನಾ ಪ್ರಥಮ ಪಂಚ ಅಭಿನೇತ್ರಿಗಳ ಸಾಲಿನಲ್ಲಿ ಸೇರಲು ಯೋಗ್ಯಳು ಎಂದು ಕೀರ್ತಿ ಪಡೆದಳು. ಈ ಚಿತ್ರ ಅಪಾರ ಯಶಸ್ಸು ಗಳಿಸಿತು. ಸಂಗೀತ ನಿರ್ದೇಶಕ ನೌಷಾದ್, ಹಿನ್ನೆಲೆಗಾಯಕ ಮಹಮದ್ ರಫಿ ಈ ಚಿತ್ರದ ಯಶಸ್ಸಿಗೆ ಕಾರಣಕರ್ತರು.

1953ರಲ್ಲಿ ಅಮ್ರೋಹಿಯ ದಈರಾ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ತಂದೆಯ ಮನೆಯಿಂದ ಹೊರಬಂದು ಗಂಡನೊಡನೆ ಇರಲಾರಂಭಿಸಿದರು. ಮೀನಾ ಅಮ್ರೋಹಿ ಇದರ ಹನ್ನೊಂದು ವರ್ಷಗಳ ಜತೆ ವಾಸದಲ್ಲಿ ಮೀನಾಳ ಪಾಲಿಗೆ 77 ಚಿತ್ರಗಳು ಬಂದಿದ್ದು, ಅವುಗಳಲ್ಲಿ 55 ಚಿತ್ರಗಳು ಪೂರ್ಣವಾಗಿದ್ದವು. ದಈರಾ, ಫುಟ್‍ಪಾತ್ ಸಹ ಗಲ್ಲಾಪೆಟ್ಟಿಗೆಯಲ್ಲಿ ಸೋತವು.
ಶರತ್‍ಚಂದ್ರರ ಕಾದಂಬರಿ ಆಧಾರಿತ ಪರ್‍ಣೀತಾ ಕೊಂಚಮಟ್ಟಿಗೆ ಯಶಸ್ವಿಯಾಯಿತೆನ್ನಬಹುದು. ಲಲಿತಳ ಪಾತ್ರದಲ್ಲಿ ಮೀನಾ ಮಿಂಚಿದಳು. ನಾಯಕ ಅಶೋಕಕುಮಾರ್; ಇದು ಉತ್ತಮ ಜೋಡಿ ಎಂದು ಸಾಬೀತಾಯಿತು.
1954ರಲ್ಲಿ ಉತ್ತಮ ನಟಿ ಎಂದು ಫಿಲಂ ಫೇರ್ ಪ್ರಶಸ್ತಿ ಪಡೆದಳು. ಬಿ.ಆರ್. ಛೋಪ್ರಾರ ಚಾಂದಿನಿ ಚೌಕ್‍ನಲ್ಲಿ ನಟಿಸಿದಳು. ಉತ್ತಮ ನಟನೆಗಾಗಿ 2ನೆಯ ಸಲ ಫಿಲಂ ಫೇರ್ ಪ್ರಶಸ್ತಿ ಪಡೆದಳು.

1955ರಲ್ಲಿ ಅಮರ್‍ಬನೀ, ಬಂದೀಷ್, ಶತರಂಗ್, ಋಕ್ಸಾನಾ, ಆಜಾದ್, ಅದಲ್-ಇ-ಜಹಂಗೀರ್, ಮೇಮ್ ಸಾಹಬ್-ಈ ಏಳು ಚಿತ್ರಗಳಲ್ಲಿ ಕೆಲಸ ಮಾಡಿದಳು. ಆಜಾದ್ ಆ ಸಾಲಿನ ಮಹೋನ್ನತ ಚಿತ್ರವೆನಿಸಿತು. 1956ರ ವೇಳೆಗೆ ವಿವಾಹಜೀವನ ಸುಖಪ್ರದವಾಗಿರದೆ, ಬಿರುಕು ಕಾಣಲಾರಂಭಿಸಿತು.

ಶಾರದಾ ಮತ್ತೆ ಕೀರ್ತಿ ತಂದಿತು. ರಾಜ್‍ಕಪೂರ್ ಮೀನಾ ಜೋಡಿ ತಾರೆಯಾಗಿ ಮೇಲೇರುತ್ತಿದ್ದಂತೆ ಜೀವನದಲ್ಲಿ ಅವಳು ಕೆಳಗಿಳಿಯುತ್ತಿದ್ದಳು, ರಾಜೇಂದ್ರಕುಮಾರ್‍ನೊಂದಿಗೆ ನಟಿಸಿದ ಚಿರಾಗ್ ಕಹಾಂ ರೋಷನೀ ಕಹಾಂ ಅಪೂರ್ವಖ್ಯಾತಿ ತಂದಿತು. ಇದರಂದಾಗಿ ರಾಜೇಂದ್ರಕುಮಾರ್ ಒಬ್ಬ ನಟನೆನಿಸಿಕೊಂಡ. ಅದೇ ರೀತಿ ಮೀನಾಳೊಂದಿಗೆ ನಟಿಸಿ ಸುನಿಲ್‍ದತ್ ಏಕ್ ಹಿ ರಾಸ್ತಾದ ಮೂಲಕ ನಟನೆನ್ನುವ ಅರ್ಹತೆ ಪಡೆದಿದ್ದ. 1960ರಲ್ಲಿ ತೆರೆಕಂಡ ದಿಲ್ ಅಪ್ನಾ ಔರ್ ಪ್ರೀತ್ ಪರಾಯ್, ಕೊಹಿನೂರ್ ದಾಖಲೆ ಸ್ಥಾಪಿಸಿದುವು. ದಿಲ್ ಆಪ್ನಾ ಪ್ರೀತ್ ಪರಾಯ್ ಚಿತ್ರವೇ ಮೀನಾಳ ಚಿತ್ರಗಳ ಪೈಕಿ ಅತ್ಯುತ್ಕøಷ್ಟವೆನ್ನುವವರೂ ಇದ್ದಾರೆ.
ಗುರುದತ್‍ನ ಸಾಹಬ್ ಬೀಬೀ ಔರ್ ಗುಲಾಮ್‍ನಲ್ಲಿ ಛೋಟಿ ಬಹೂಪಾತ್ರದಲ್ಲಿ ಶಕ್ತಿಮೀರಿ ಪ್ರದರ್ಶನ ನೀಡಿ ಎಲ್ಲರಿಗಿಂತ ಮಿಗಿಲಾಗಿ ಅಭಿನಯಿಸಿದಳು; ಈ ಪಾತ್ರ ಅಪಾರ ಜನಪ್ರಿಯತೆ ಗಳಿಸಿದ್ದು 1962ರ ದಿನಗಳಲ್ಲಿ. ಕೊನೆಯ ಎರಡು ವರ್ಷಗಳ ವೈವಾಹಿಕಜೀವನ ನರಕ ಘೋರವೆನಿಸಿದವು. ಸಾಹೇಬ್ ಬೀಬೀ ಔರ್ ಗುಲಾಮ್ ಬರ್ಲಿನ್ ಚಿತ್ರೋತ್ಸವಕ್ಕೆ ಭಾರತದ ಪರವಾಗಿ ಆಯ್ಕೆಗೊಂಡಿತು. ಮೀನಾ ಪ್ರತಿನಿಧಿಯಾಗಿ ಆಯ್ಕೆಗೊಂಡಳು. 1962-63ರಲ್ಲಿ ಹದಿನಾರು ಚಿತ್ರಗಳಲ್ಲಿ ಕೆಲಸ ಮಾಡಿದಳು. 1963ರ ಏಪ್ರಿಲ್ 5ರಂದು ಫಿಲಂ ಫೇರ್‍ನ ಉತ್ತಮ ಅಭಿನೇತ್ರಿ ಪ್ರಶಸ್ತಿ ಪಡೆದಳು.

ಸಾಹಬ್ ಬೀಬಿ ಔರ್ ಗುಲಾಮ್, ಆರತಿ, ಮೈ ಚುಪ್ ರಹೂಂಗಿ-ಮೂರು ಚಿತ್ರಗಳಲ್ಲಿಯೂ ಈಕೆಯ ಅಭಿನಯ ಉತ್ತಮ ಎನಿಸಿತ್ತು.

ಗುಲ್ಜಾರ್ ನಿರ್ದೇಶನದ ಬೇನಜೀರ್ ಚಿತ್ರದಿಂದಾಗಿ ಕೌಟುಂಬಿಕ ಸುಖ ಕೊನೆಗೊಂಡಿತು. ಲ1963ರ ಅಂತ್ಯದ ವೇಳೆಗೆ ಗಂಡನನ್ನು ಬಿಟ್ಟುಬಿಡಲು ನಿರ್ಧರಿಸಿ. 1964ರ ಫೆಬ್ರವರಿಯಲ್ಲಿ ಅವನಿಂದ ದೂರವಾದಳು. ಪಿಂಜರೇಕೆ ಪಂಛೀ ಮುಹೂರ್ತದ ಸಮಯದಲ್ಲಿ ಮೀನಾ ಪತಿಯಿಂದ ದೂರವಾದಳು.

1964ರಲ್ಲಿ ಬೇನಜೀರ್ (ಬಿಮಲ್‍ರಾಯ್), ಚಿತ್ರಲೇಖ (ಕೇದಾರಶರ್ಮ), ಫಜಲ್, ಮೈ ಲಡ್ಕಿ ಹೂಂ, ಸಾಂಜ್ ಔರ್ ಸವೇರಾ ಬಿಡುಗಡೆಯಾದವು. ಈ ಐದರ ಪೈಕಿ ನಾಲ್ಕರಲ್ಲ ಧರ್ಮೇಂದ್ರನಿದ್ದ. ಧರ್ಮೇಂದ್ರನ ದಶೆ ಬದಲಾದುದು ಮೀನಾಳಿಂದ. 1966ರಲ್ಲಿ ಓ. ಪಿ. ರಲ್ಹನ್‍ರ ಫೂಲ್ ಔರ್ ಪತ್ಥರ್ ಈ ಜೋಡಿಯನ್ನು ಒಟ್ಟಿಗೆ ಗುರ್ತಿಸಿದ ಚಿತ್ರ. 1966ರಲ್ಲಿ ಉತ್ತಮ ನಟಿ ಪ್ರಶಸ್ತಿ ದಕ್ಕಿತು.

ಬಹೂಬೇಗಂ, ಮಝಲೀ ದೀದೀ. ನೂರ್ ಜಹಾನ್, ಅಭಿಲಾಷ್ ಚಿತ್ರಗಳು ಬಂದವು. ಭಾರತದ ಪ್ರಥಮ ಶ್ರೇಣಿಯ ದುರಂತ ನಾಯಕಿ ಕೇವಲ ಊಟದಿಂದಲೇ ಬದುಕಲಾರಳೆಂಬುದನ್ನು ಈ ಚಿತ್ರಗಳು ದೃಷ್ಟಾಂತಪಡಿಸಿದವು. ಅತಿ ಕುಡಿತದಿಂದ ಲಿವರ್ ತೊಂದರೆ ಉದ್ಭವಿಸಿತು. ಲಂಡನ್‍ನಲ್ಲಿ ಚಿಕಿತ್ಸೆ ಪಡೆದು 1968ರ ಸೆಪ್ಟೆಂಬರ್‍ನಲ್ಲಿ ಭಾರತಕ್ಕೆ ಮರಳಿ. ತಕ್ಷಣ ಕರ್ತವ್ಯನಿರತಳಾದಳು ಗುಲ್ಜಾರ್ ನಿರ್ದೇಶಿಸಿದ ಮೇರೆ ಅಪ್ನೆ ಈಕೆಯ ಹೆಸರನ್ನು ಉಚ್ಛ್ರಾಯಕ್ಕೆ ತಂದಿತು. ಗೋಮತಿ ಕೆ ಕಿನಾರೇಯನ್ನು ಪೂರೈಸಿದಳು.

1958ರಷ್ಟು ಹಿಂದೆಯೇ ಚಿತ್ರದ ಮುಹೂರ್ತವಾಗಿದ್ದ ಪಾಕೀಜಾóದ ಹಸ್ತಪ್ರತಿ ಸಿದ್ಧವಾದುದು 1960ರಲ್ಲಿ. 1961ರಲ್ಲಿ ಅಶೋಕಕುಮಾರ್ ನಾಯಕ. ಮೀನಾನಾಯಕಿಯಾಗಿ ಆಯ್ಕೆಯಾಗಿದ್ದರು. 1969ರ ಮಾರ್ಚ್‍ನಲ್ಲಿ ಚಿತ್ರೀಕರಣ ಪ್ರಾರಂಭಗೊಂಡು 1971ರ ಕೊನೆಯ ವೇಳೆಗೆ ಚಿತ್ರೀಕರಣ ಮುಕ್ತಾಯವಾಯಿತು. 15 ವರ್ಷಗಳ ಸುದೀರ್ಘಕಾಲದ ಈಸ್ಟ್‍ಮನ್ ವರ್ಣದ, ಒಂದೂವರೆ ಕೋಟಿ ರೂಪಾಯಿ ವೆಚ್ಚದ ಸಿನಿಮಾಸ್ಕೋಪ್ ಪಾಕೀಜಾó ತೆರೆಗೆ ಸಿದ್ಧವಾಯಿತು, ಯಶಸ್ವಿಯಾಯಿತು. ಪಾಕೀಜಾóದೊಂದಿಗೆ ಮೀನಾಳ ಬಾಳಿನ ಚಿತ್ರವೂ ಕೊನೆಗೊಂಡತು. 1972ರ ಮಾರ್ಚ್ 31ರಂದು ಮುಂಬಯಿಯಲ್ಲಿ ಕಾಲವಾದಳು.

ಮೂವತ್ತಾರು ವರ್ಷಗಳ ಕಾಲದಲ್ಲಿ 77 ಚಿತ್ರಗಳಲ್ಲಿ ನಟಿಸಿದಳು. ಪಾತ್ರದಲ್ಲಿ ತಲ್ಲೀನಳಾಗಿ ಅದ್ಭುತ ಅಭಿನಯ ನೀಡುತ್ತಿದ್ದಳು. ಕೆಲಸದಲ್ಲಿ ತೀವ್ರ ಆಸಕ್ತಿ. ಆಸ್ಥೆ ವಹಿಸುತ್ತಿದ್ದಳು. ಈಕೆಯಲ್ಲಿ ಅಪಾರ ಬುದ್ಧಿಶಕ್ತಿ. ಕಾವ್ಯಶಕ್ತಿಯಿತ್ತು. ಉರ್ದುಪದ್ಯಗಳನ್ನು ಬರೆಯುತ್ತಿದ್ದಳು. ಇಂಪಾದ ಧ್ವನಿ. ಮಾದಕಕಣ್ಣುಗಳ ಮೀನಾಕುಮಾರಿ ಭಾರತದ ಅತ್ಯಂತ ಶ್ರೇಷ್ಠ ದುರಂತ ನಾಯಕಿ ಎಂಬ ಕೀರ್ತಿಗೆ ಪಾತ್ರಳಾದಳು.

ನಾಜ್ ಎಂಬ ಗುಪ್ತ ನಾಮದಡಿ ಕವಿತೆ ಬರೆಯುತ್ತಿದ್ದ ಈಕೆ ಒಳ್ಳೆಯ ಕವಯಿತ್ರಿಯೇ ಆಗಿದ್ದಳು. ಕೊನೆಯತನಕ ಪದ್ಯರಚನೆ ಮುಂದುವರೆಸಿದಳು. ಮಹಮದೀಯಳಾಗಿ ಹುಟ್ಟಿದ ಈಕೆ ವ್ಯೆಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಭಾರತೀಯತೆಯ ಸಂಕೇತವಾಗಿ ಉಳಿದಳು. ಪೌರಾಣಿಕಪಾತ್ರವಾಗಲಿ, ಹಿಂದೂ ಗೃಹಿಣಿಯ ಪಾತ್ರವಾಗಲಿ, ಮುಸ್ಲಿಂ ಬೀಬಿ ಪಾತ್ರವಾಗಲಿ, ಯಶಸ್ವಿಯಾಗಿ ನಿರ್ವಹಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡು ತನ್ನ ಸ್ನೇಹ, ಪ್ರೇಮದಿಂದಾಗಿ ಎಲ್ಲ ಕೋಮಿನವರ ಪ್ರೀತಿಯನ್ನು ಸಂಪಾದಿಸಿದಳು.
(ಎನ್.ಎಸ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ